ತ್ರಿಚೂರ್
	ಕೇರಳ ರಾಜ್ಯದ ಒಂದು ಪಟ್ಟಣ; ಒಂದು ಜಿಲ್ಲೆ. ತ್ರಿಚೂರ್ ಪಟ್ಟಣ ಕಡಲ ತೀರದಿಂದ 19 ಕಿ.ಮೀ. (12ಮೈ.) ದೂರದಲ್ಲಿ, ಒಳನಾಡಿನಲ್ಲಿ ಕೊಚ್ಚಿಯ ಉತ್ತರಕ್ಕೆ 73 ಕಿ.ಮೀ, (46 ಮೈ.) ದೂರದಲ್ಲಿದೆ. ಜನಸಂಖ್ಯೆ 76,241 (1971). ಇದು ಭಾರತದ ಪಶ್ಚಿಮ ಕರಾವಳಿಯ ಅತ್ಯಂತ ಪ್ರಾಚೀನ ಪಟ್ಟಣವೆಂದು ಹೇಳಲಾಗಿದೆ. ಒಂದು ಸಣ್ಣ ಬೆಟ್ಟದ ಸುತ್ತ ಈ ಪಟ್ಟಣ ಬೆಳೆದಿದೆ. ಬೆಟ್ಟದ ಮೇಲೆ ವಡಕ್ಕುನಾಥ ದೇವಾಲಯವಿದೆ. ತ್ರಿಚೂರಿನಲ್ಲಿ ಹಿಂದಿನ ರಾಜರ ಅರಮನೆ, ಕೋಟೆ ಮತ್ತು ಚರ್ಚುಗಳು ಇವೆ. ಇದು ಒಂದು ವ್ಯಾಪಾರ ಕೇಂದ್ರ ಮತ್ತು ರೈಲ್ವೆ ನಿಲ್ದಾಣ. ಇಲ್ಲಿ ಹತ್ತಿ ಗಿರಣಿಗಳು, ಹೆಂಚಿನ ಕಾರ್ಖಾನೆಗಳು, ಮರ ಕೊಯ್ಯುವ ಯಂತ್ರಗಳು, ಎಣ್ಣೆ ತಯಾರು ಮಾಡುವ ಕಾರ್ಖಾನೆಗಳು ಇವೆ. ಹೆಂಚಿನ ಕಾರ್ಖಾನೆ ಇರುವುದು ತ್ರಿಚೂರಿನ ಹೊರವಲಯದಲ್ಲಿರುವ ಪುದುಕಾಡಿನಲ್ಲಿ. ತ್ರಿಚೂರಿನಲ್ಲಿ ಐದು ಕಾಲೇಜುಗಳೂ ವಸ್ತುಸಂಗ್ರಹಾಲಯವೂ ಪ್ರಾಣಿ ಸಂಗ್ರಹಾಲಯವೂ ಇವೆ. ಕೇರಳದ ಇತರ ಭಾಗಗಳೊಂದಿಗೆ ತ್ರಿಚೂರಿಗೆ ರಸ್ತೆ ಹಾಗೂ ರೈಲ್ವೆ ಸಂಪರ್ಕವಿದೆ.

	ತ್ರಿಚೂರ್ ಜಿಲ್ಲೆಯ ವಿಸ್ತೀರ್ಣ 3,032 ಚ.ಕಿಮೀ.; ಜನಸಂಖ್ಯೆ 21,28,797 (1971). ಇದು ಹಿಂದಿನ ಕೊಚ್ಚಿ ಸಂಸ್ಥಾನದ ಭಾಗವಾಗಿತ್ತು. ಜಿಲ್ಲೆಯ ಆಗ್ನೇಯ ಭಾಗದಲ್ಲಿ ಪಶ್ಚಿಮ ಘಟ್ಟಗಳು ಹಬ್ಬಿವೆ. ಮಿಕ್ಕಭಾಗ ಕರಾವಳಿ ಮೈದಾನ. ಕೃಷಿ ಇಲ್ಲಿಯ ಮುಖ್ಯ ಕಸುಬು, ಬತ್ತ, ತೆಂಗು ಪ್ರಧಾನ ಬೆಳೆಗಳು.
(ಎಸ್.ಎನ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ